ರಚನ: ಪುರಂದರದಾಸರು

ದೇವ  ಬಂದ  ನಮ್ಮಸ್ವಾಮಿ  ಬಂದಾನೋ |
ದೇವರ ದೇವಶಿಖಾಮಣಿ  ಬಂದಾನೋ || ಪ ||

ಉರಗಶಯನ  ಬಂದ  ಗರುಡಗಮನ  ಬಂದ |
ನರಗೊಲಿದವ  ಬಂದ  ನಾರಾಯಣ  ಬಂದಾನೋ || ೧ ||

ಮಂದರೊದ್ಧಾರ  ಬಂದ  ಮಾಮನಹರ  ಬಂದ |
ಬೃಂದಾವನಪತಿ  ಗೋವಿಂದ ಬಂದಾನೋ || ೨ ||

ನಕ್ರಹರನು  ಬಂದ  ಚಕ್ರಧರನು  ಬಂದ |
ಅಕ್ರೂರಗೊಲಿದ ತ್ರಿವಿಕ್ರಮ  ಬಂದಾನೋ || ೩ ||

ಪಕ್ಷಿವಾಹನ  ಬಂದ  ಲಕ್ಷ್ಮಣಾಗ್ರಜ  ಬಂದ |
ಅಕ್ಷಯಫಲದ  ಶ್ರೀಲಕ್ಷ್ಮಿರಮಣ  ಬಂದಾನೊ || ೪ ||

ನಿಗಮಗೋಚರ  ಬಂದ  ನಿತ್ಯತೃಪ್ತನು  ಬಂದ |
ನಗೆಮುಖ ಪುರಂದರವಿಠ್ಠಲ  ಬಂದಾನೋ || ೫ ||

 ಆಲಾಪನ 
ಪಂ. ಭೀಮಸೆನ ಜೋಷಿಯವರು ಹಾಡಿದ ಪದ, ಯೂಟ್ಯೂಭ್ ನಲ್ಲಿ

ವರ್ಗ: ಪುರಂದರದಾಸ ಸಾಹಿತ್ಯ